05-May-2014
ಚುಕ್ಕುಬುಕ್ಕು

ಹಿಂದೂಸ್ಥಾನಿ ಗಾಯಕಿ ಸವಿತಾ ಅಮರೇಶ ನುಗಡೋಣಿಯವರು ಹಾಡಿದ ವಚನಗಳ ಹೊಸ ಸಂಗ್ರಹ ಬಿಡುಗಡೆಯಾಗಿದೆ. ‘ವಚನಾರಾಧನ’ ಎಂಬ ಈ ಧ್ವನಿಮುದ್ರಿಕೆಯನ್ನು ಆಕಾಶ್‌ ಆಡಿಯೋ ಸಂಸ್ಥೆ ಇದೀಗ ಹೊರತಂದಿದೆ. ಸವಿತಾ ಅವರ ಹಿಂದಿನ ವಚನ ಸಂಗ್ರಹ ‘ಭಕ್ತಿ ಬೆಳುದಿಂಗಳು’ ಅನ್ನು ಕೇಳಿದವರಿಗೆ ಇದು ನಿಜಕ್ಕೂ ಸಿಹಿ ಸುದ್ದಿ. ಅದನ್ನು ಕೇಳಿಲ್ಲದವರಿಗೆ ಹೇಳಬಹುದಾದ ‘ಕಿವಿ’ಮಾತೆಂದರೆ ಈ ಹೊಸ ಸಿಡಿಯನ್ನು ತಪ್ಪದೆ ಕೇಳಿ. ಅದಕ್ಕೂ ಮೊದಲು ಇಲ್ಲಿ ನಾವು ಆರಿಸಿ ನೀಡಿರುವ ಅಲ್ಲಮನ ಒಂದು ವಚನವನ್ನು ಉಚಿತವಾಗಿ ಕೇಳಿ ಆನಂದಿಸಿ.

‘ವಚನಾರಾಧನ’ ಧ್ವನಿಮುದ್ರಿಕೆಯಲ್ಲಿ ಒಟ್ಟು ೧೫ ವಚನಗಳಿವೆ. ಬಸವಣ್ಣ, ಅಕ್ಕಮಹಾದೇವಿ, ಅಲ್ಲಮ ಪ್ರಭು, ಐದಕ್ಕಿ ಲಕ್ಕಮ್ಮ, ಚನ್ನಬಸವಣ್ಣ, ದೇವರ ದಾಸಿಮಯ್ಯ ಮುಂತಾದವರ ರಚನೆಗಳು ಇದರಲ್ಲಿವೆ. ಪ್ರತಿಯೊಂದಕ್ಕೂ ಹಿರಿಯ ವಿಮರ್ಶಕ ಓ ಎಲ್‌ ನಾಗಭೂಷಣ ಸ್ವಾಮಿಯವರ ಆರಂಭಿಕ ಮಾತುಗಳು ಕೇಳುವ ಹಿಗ್ಗನ್ನು ಹಿಗ್ಗಿಸಿವೆ.

ಕತೆಗಾರ ಅಮರೇಶ ನುಗಡೋಣಿಯವರ ಪತ್ನಿ ಸವಿತಾ, ಜೈಪುರ ಮತ್ತು ಗ್ವಾಲಿಯರ್‌ ಘರಾನಾಗಳ ಹಿಂದೂಸ್ಥಾನಿ ಗಾಯಕಿ.  ಮಲ್ಲಿಕಾರ್ಜುನ್‌ ಮನ್ಸೂರ್‌ ಹಾಗೂ ಸಿದ್ಧರಾಮ ಜಂಬಲದಿನ್ನಿ ಅವರ ಪ್ರೇರಣೆಯಲ್ಲಿ ಸಂಗೀತಾಭ್ಯಾಸ ನಡೆಸಿರುವ ಅವರು ಈಗ ವಿದುಶಿ ಜಯಶ್ರೀ ಪಾಟ್ನೇಕರ್‌ ಅವರ ಬಳಿ ಅಭ್ಯಾಸ ಮುಂದುವರಿಸಿದ್ದಾರೆ. ವಚನಗಳು, ದಾಸರ ಪದಗಳು, ಭಜನೆಗ ಹಾಡುಗಾರಿಕೆಯಂತೆಯೇ ಅವರ ರಾಗಗಳ ಪ್ರಸ್ತುತಿಯೂ ಈಗಾಗಲೇ ನಾಡಿನ ಸಂಗೀತಾಸಕ್ತರ ಮನಸೂರೆಗೊಂಡಿದೆ.

‘ವಚನಾರಾಧನ’ ಧ್ವನಿಮುದ್ರಿಕೆಗೆ ಸಂಗೀತ ಸಂಯೋಜಿಸಿದವರು ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ. ಈ ಸಿಡಿಯ ಬೆಲೆ ೪೫ ರೂ.

03-Apr-2014
ಚುಕ್ಕುಬುಕ್ಕು

ಬಿ ಆರ್‌ ಲಕ್ಷ್ಮಣ್‌ರಾವ್‌ ಅವರು ನಮ್ಮ ‘ಕಿವಿಸಮಯ’ ಅಂಕಣಕ್ಕಾಗಿ ತಮ್ಮ ಇಷ್ಟದ ಕವಿತೆಯೊಂದನ್ನು ಆರಿಸಿ ವಾಚಿಸಿದ್ದಾರೆ. ಕವಿತೆಯ ಶೀರ್ಷಿಕೆ ‘ಈಗ’.

‘ಹೆಡೆ ಎತ್ತಿ ಆಡೋ ನಾಗ, ಆ ಕಾಲ ಮುಗೀತಣ್ಣ ಈಗ’ ಎಂದು ಶುರುವಾಗುವ ಈ ಪದ್ಯ ಕೇಳಿ ಏನೆನಿಸಿತೆಂದು ತಿಳಿಸಿ. `ಹೆಡೆ ಮಣಿ ಬೆಳಕಲಿ ಧ್ಯಾನ, ಗುಪ್ತ ನಿಧಿಯ ಜೋಪಾನ’!

24-Mar-2014
ಚುಕ್ಕುಬುಕ್ಕು

ಪ್ರಿಯ ಕತೆಗಾರ ಯಶವಂತ ಚಿತ್ತಾಲರು ಅಗಲಿದ ಈ ಹೊತ್ತು ಅವರ ಧ್ವನಿಮುದ್ರಿಕೆಯೊಂದನ್ನು ನಿಮಗೆಂದು ಕೇಳಿಸುತ್ತಿದ್ದೇವೆ, ನಮ್ಮ ಕಿವಿಸಮಯ ಅಂಕಣದಲ್ಲಿ.

ಅಮೆರಿಕನ್‌ ಲೈಬ್ರರಿ ಆಫ್‌ ಕಾಂಗ್ರೆಸ್‌ ತನ್ನ ದ್ವಿಶತಮಾನೋತ್ಸವ ಆಚರಣೆಯ ಅಂಗವಾಗಿ ಯಶವಂತ ಚಿತ್ತಾಲರ ಕೆಲ ಕಥಾಭಾಗಗಳ ವಾಚನವನ್ನು ಧ್ವನಿಮುದ್ರಿಸಿತ್ತು. ಇಲ್ಲಿ ಚಿತ್ತಾಲರು ತಮ್ಮ ‘ಮೂರುದಾರಿಗಳು’ ಕಾದಂಬರಿಯ ಉಪಸಂಹಾರವನ್ನು ವಾಚಿಸಿದ್ದಾರೆ.

ಇಂಟರ್‌ನೆಟ್ಟಿನಲ್ಲೆಲ್ಲೋ ಕಂಡ ಈ ಧ್ವನಿಮುದ್ರಿಕೆಯನ್ನು ಚುಕ್ಕುಬುಕ್ಕುಗಾಗಿ ಕಳಿಸಿಕೊಟ್ಟ ರವೀಂದ್ರ ಮಾವಖಂಡ ಅವರಿಗೆ ಕೃತಜ್ಞತೆಗಳು.

14-Mar-2014
ಚುಕ್ಕುಬುಕ್ಕು

ನಮ್ಮ ಕೇಳು ವಿಭಾಗ ‘ಕಿವಿ’ಸಮಯದಲ್ಲಿ ಈ ಸಲ ಒಂದು ಶೀತಲ ಕವಿತೆ.

ಹೊಸ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ಬರೆದ ‘ಬರ್ಫಿನ ಚಾದರ’ ಎಂಬ ಕವಿತೆ ಇದು. ಅದನ್ನು ಕವಿಯೇ ನಿಮ್ಮೆದುರು ವಾಚಿಸಿದ್ದಾರೆ.  ‘ಹಲ್ಲು ನೋವೆಂದು ದವಡೆಗಿಟ್ಟುಕೊಂಡ ಬರ್ಫಿನ ಹೊರೆ’ ‘ ಬರ್ಫಿನ ಚಾದರ ಹೊದ್ದ ವೃಕ್ಷ’...ಹೀಗೆ ಹಲವು ತಾಜಾ ಬಿಂಬಗಳನ್ನು ಮನಕ್ಕೆ ಅಂಟಿಸುವ ಈ ವಾಚನವನ್ನು ಆನಂದಿಸಿ.

26-Feb-2014
ಚುಕ್ಕುಬುಕ್ಕು

ಯುವ ಕವಿ ಆರೀಫ್‌ ರಾಜಾ ಬರೆದ ‘ಪುವ್ವಿ’ ಕವಿತೆ ನಮ್ಮ ಈ ಬಾರಿಯ ಕಿವಿಸಮಯ. ಇದನ್ನು ಓದಿದವರು ಆರೀಫರ ಸಹಲೇಖಕ ಟಿ ಎಸ್‌ ಗೊರವರ.

ಕವಿತೆಯನ್ನು ಕೇಳಿ ನಿಮ್ಮ ಅನಿಸಿಕೆ ತಿಳಿಸಿ.

29-Jan-2014
ಚುಕ್ಕುಬುಕ್ಕು

ಶಾಂತಾರಾಮ ಸೋಮಯಾಜಿಯವರ ಮನಕಲಕುವ ಕತೆ ‘ಎಂದೂ ಬೆಳೆಯದ ಹುಡುಗ’ವನ್ನು ಈ ಬಾರಿಯ ನಮ್ಮ ‘ಕಿವಿಸಮಯ’ದಲ್ಲಿ ಆಲಿಸಿರಿ. ಇದನ್ನು ವಾಚಿಸಿದ್ದಾರೆ ಸೌಮ್ಯ ಕಲ್ಯಾಣ್‌ಕರ್‌.

ಅರ್ಧಗಂಟೆಗೂ ದೀರ್ಘ ಅವಧಿಯ ಈ ಓದನ್ನು ತಪ್ಪದೆ ಬಿಡುವು ಮಾಡಿಕೊಂಡು ಕೇಳಿ. ಮತ್ತು ಅನಿಸಿಕೆ ತಿಳಿಸಿ. ನಿಮಗಿದು ಇಷ್ಟವಾದರೆ ಈ ತಾಣದಲ್ಲಿ ಹೆಚ್ಚೆಚ್ಚು ಕಥಾವಾಚನಗಳನ್ನು ಪ್ರಕಟಿಸುವ ಬಗ್ಗೆ ನಾವು ಆಲೋಚಿಸಬಹುದು.

17-Jan-2014
ಚುಕ್ಕುಬುಕ್ಕು

ಹಿರಿಯ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿಯವರ ಕ್ಲಾಸಿಕ್‌ ಕವಿತೆ ‘ಉತ್ತರಾಯಣ’ ನಮ್ಮ ಕಿವಿಸಮಯದ ವಿಶೇಷ. ೨೦ನಿಮಿಷಗಳಷ್ಟು ದೀರ್ಘವಾದ ಈ ತೀವ್ರವಾದ ಕವಿತೆಯನ್ನು ಎಚ್‌ಎಸ್‌ವಿ ಇಲ್ಲಿ ಮನಮುಟ್ಟುವಂತೆ ವಾಚಿಸಿದ್ದಾರೆ.

ಒಂದಷ್ಟು ವಿರಾಮ ಮಾಡಿಕೊಂಡು ಸಮಾಧಾನದಲ್ಲಿ ಕುಳಿತು, ಕಣ್ಮುಚ್ಚಿ ಆಲಿಸುವಿರೋ, ಅಥವಾ ಪುಸ್ತಕ ತೆರೆದು ಈ ಉದ್ದ ಕವನದ ಸಾಲುಗಳ ಗುಂಟ ಕಣ್ಣಾಡಿಸುತ್ತ ವಾಚನಕ್ಕೆ ಕಿವಿಗೊಡುತ್ತೀರೋ ನಿಮಗೆ ಬಿಟ್ಟಿದ್ದು.

ಅನಿಸಿಕೆ ಹೇಳುವುದು ಮರೆಯಬೇಡಿ.

08-Jan-2014
ಚುಕ್ಕುಬುಕ್ಕು

ಬೇಂದ್ರೆ, ಅಡಿಗ, ನರಸಿಂಹಸ್ವಾಮಿ ಪದ್ಯಗಳನ್ನು ಮನಮುಟ್ಟುವಂತೆ ಓದಬಲ್ಲ ಎಸ್‌ ದಿವಾಕರ್‌ ಸ್ವತ: ಕವಿತೆಗಳನ್ನೂ ಬರೆದಿದ್ದಾರೆ. ಅವರ ಒಂದು ಚೆಂದದ ಕವನ ‘ಮೊಟ್ಟೆ’ ಇಲ್ಲಿದೆ.

ಇದನ್ನು ದಿವಾಕರ್‌ ಅವರೇ ಸೊಗಸಾಗಿ ವಾಚಿಸಿದ್ದಾರೆ. ಆದರೂ ದಿವಾಕರ್‌ ತಮ್ಮ ಇಷ್ಟದ ಕವಿಗಳ ಕವಿತೆಗಳನ್ನು ವಾಚಿಸುವಾಗ ಇರುವ  ಭಾವಾವೇಶವೊಂದು ತಮ್ಮದೇ ಕವಿತೆ ಓದುವಾಗ ತುಸು ಕಡಿಮೆಯಾಗಿದೆ ಎಂದು ಅನಿಸುತ್ತಿದೆಯೆ?

ಬನ್ನಿ ಒಂದು ಒಳ್ಳೆಯ ಕವಿತೆಗೆ ಕಿವಿಯಾಗಿ.

31-Dec-2013
ಚುಕ್ಕುಬುಕ್ಕು

ಚುಕ್ಕುಬುಕ್ಕುವಿನ ಕೇಳು ವಿಭಾಗಕ್ಕೆ ಸ್ವಾಗತ.

ಈ ಬಾರಿ  ಶ್ರೀದೇವಿ ಕಳಸದ ವಾಚಿಸಿದ ಕವಿತೆಯೊಂದನ್ನು ಕೇಳಿ. ಈ ಪದ್ಯದ ಕವಿಯೂ ಅವರೇ.  ಅವರ ಭಾವಪೂರ್ಣ ಓದು ಕವಿತೆ ಕೇಳುವ ಸೊಗಸನ್ನು ಹೆಚ್ಚಿಸಿದರೆ, ಹಿನ್ನೆಲೆಗಿರುವ ತಾನ್‌ಪುರದ ಪ್ರೇಮಮಯ ನಾದ ಪದ್ಯವನ್ನು ಮತ್ತಷ್ಟು ಹೃದ್ಯವಾಗಿಸಿದೆ.

ಪೇಟಿ, ತಬಲಾ, ಶ್ರೋತೃಗಳಿಲ್ಲದ ಕೊರತೆಯನ್ನು ತನ್ನದೇ ರೀತಿಯಲ್ಲಿ ನಿವಾರಿಸುವ ಹುಡುಗ, ರಿಯಾಜ್‌ ನಿಲ್ಲಿಸಿ ಪೇಟಿಯೆದೆಗೆ ಒರಗಿದ ಹುಡುಗಿಯಿಂದ ಅವನು ಹುಟ್ಟಿಸಿದ ಜೀವದುಸಿರನ ಸಂಗೀತ ... ಕೇಳಿ ಮೆಚ್ಚಲು ಹಲವು ಕಾರಣಗಳಿವೆ ಇಲ್ಲಿ.

 

23-Dec-2013
ಚುಕ್ಕುಬುಕ್ಕು

ವಿಮರ್ಶಕ ಓ ಎಲ್‌ ನಾಗಭೂಷಣಸ್ವಾಮಿಯವರು ರಾಷ್ಟ್ರಕವಿ ಜಿ ಎಸ್‌ ಶಿವರುದ್ರಪ್ಪನವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆಯೊಂದರ ಧ್ವನಿಮುದ್ರಿಕೆ ಇಲ್ಲಿದೆ. ಇದನ್ನು ಧ್ವನಿಮುದ್ರಿಸಿದ್ದು ಸಂಪದ ಡಾಟ್‌ ನೆಟ್‌; ಕವಿಗೆ ೮೦ ವರ್ಷ ತುಂಬಿದ ಸಂದರ್ಭದಲ್ಲಿ. 

ಜಿಎಸ್‌ಎಸ್‌ ನಮ್ಮನ್ನಗಲಿದ ಈ ಸಂದರ್ಭದಲ್ಲಿ ಅವರ ಮಾತುಗಳನ್ನು ಕೇಳಲು ಅವಕಾಶ ಮಾಡಿಕೊಟ್ಟ ಸಂಪದದ ಹರಿಪ್ರಸಾದ್‌ ನಾಡಿಗ್‌ ಅವರಿಗೆ ನಮ್ಮ ಕೃತಜ್ಞತೆಗಳು. ಈ ಸಂದರ್ಶನಕ್ಕೆ ಸಂಬಂಧಿಸಿದ ಸಂಪದದ ಪುಟ ಇಲ್ಲಿದೆ. ಅದನ್ನೂ ನೋಡಿ.

(8)
(6)